Latest Posts, ಕನ್ನಡ ಲೇಖನಗಳು

ವೇದ ಗಣಿತದ ಮಹತ್ವ ಮತ್ತು ಪ್ರಯೋಜನಗಳು

ಭಾರತೀಯ ಗಣಿತಜ್ಞರು ಗಣಿತದ ವಿವಿಧ ಶಾಖೆಗಳ ಅಧ್ಯಯನಕ್ಕೆ ಮೂಲ ಕೊಡುಗೆ ನೀಡಿದ್ದಾರೆ. ಶ್ರೇಷ್ಠ ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ಗುರುತಿಸಲು “ರಾಷ್ಟ್ರೀಯ ಗಣಿತ ದಿನ” ವನ್ನು (ಭಾರತದಲ್ಲಿ ಡಿಸೆಂಬರ್ 22 ರಂದು ) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ,ಪ್ರಾಚೀನ ಭಾರತೀಯ ಜ್ಞಾನ ನಿಧಿಯಿಂದ ಪತ್ತೆಯಾದ ವೇದ ಗಣಿತದ ಮಹತ್ವ ಮತ್ತು ಪ್ರಯೋಜನಗಳನ್ನು ನಾವು ಅರ್ಥಮಾಡಿಕೊಳ್ಳೋಣ.

ವೇದ ಗಣಿತ ಎಂದರೇನು?

ಇದು ಪ್ರಾಚೀನ ಭಾರತೀಯ ಗಣಿತಶಾಸ್ತ್ರದ ಒಂದು ವ್ಯವಸ್ಥೆಯಾಗಿದ್ದು, 16 ಸೂತ್ರಗಳು ಮತ್ತು 13 ಉಪ-ಸೂತ್ರಗಳನ್ನು ಒಳಗೊಂಡಿದೆ. ಭಾರತದ ಗಣಿತಜ್ಞರಾದ ಜಗದ್ಗುರು ಶ್ರೀ ಭಾರತಿ ಕೃಷ್ಣ ತೀರ್ಥರವರು ಆ ಜ್ಞಾನವನ್ನು ಪುನರುಜ್ಜೀವನಗೊಳಿಸಿದ್ದಾರೆ.ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ವೇದ ಗಣಿತದ ಸೂತ್ರಗಳನ್ನು ಕಲಿಯುವುದು ಸುಲಭ ಮತ್ತು ಸರಳ.

ವೇದ ಗಣಿತದ ಪ್ರಯೋಜನಗಳೇನು?

  • ಇದು ಮನಸ್ಸಿನ ಸ್ವಾಭಾವಿಕ ಕಾರ್ಯಗಳಿಗೆ ಹೊಂದಿಕೆಯಾಗುತ್ತದೆ, ಆದ್ದರಿಂದ ಸರಳ ಸೂತ್ರಗಳನ್ನು ಬಳಸಿಕೊಂಡು ಕಷ್ಟದ ಲೆಕ್ಕಾಚಾರಗಳನ್ನು ಮಾಡಬಹುದು.
  • ಇದು ವೇಗಕ್ಕೆ ಪ್ರಸಿದ್ಧವಾಗಿದೆ. ಇದು ಸಾಂಪ್ರದಾಯಿಕ ವಿಧಾನಗಳಿಗಿಂತ ವೇಗವನ್ನು 10 ರಿಂದ 15 ಪಟ್ಟು ಹೆಚ್ಚಿಸುತ್ತದೆ ಎಂದು ವಿದ್ವಾಂಸರು ನಂಬುತ್ತಾರೆ.
  • ವೇದ ಗಣಿತವು ವಿದ್ಯಾರ್ಥಿಗಳನ್ನು ಮಾನಸಿಕ ಲೆಕ್ಕಾಚಾರಗಳಿಗೆ ಸಜ್ಜುಗೊಳಿಸುತ್ತದೆ, ಆದ್ದರಿಂದ ಇದು ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ ಮತ್ತು ಮನಸ್ಸನ್ನು ತೀಕ್ಷ್ಣಗೊಳಿಸುತ್ತದೆ.
  • ಹೆಚ್ಚು ಸೂಕ್ತವಾದ ವಿಧಾನವನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿಗಳು ಸೃಜನಶೀಲರಾಗಬಹುದು. ಇದು ಅವರ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
  • ಇದರ ವೇಗದಿಂದಾಗಿ, ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.
  • ಇದು ಸರಳವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಗಣಿತ ಕಲಿಯುವಿಕೆಯ ಆನಂದ ಮತ್ತು ಆಸಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಅವರ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ.
  • ವೇದ ಗಣಿತ ತಂತ್ರಗಳ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಮ್ಮ ಉತ್ತರಗಳನ್ನು (ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಮಡಿದ ಲೆಕ್ಕಗಳನ್ನು ) ಮರು ಪರೀಕ್ಷಿಸಿಕೊಳ್ಳಬಹುದು.
  • ವೇದ ಗಣಿತವನ್ನು ಗಣಿತಶಾಸ್ತ್ರದ ಹೊಸ/ಸುಧಾರಿತ ಶಾಖೆಗಳಲ್ಲೂ ಕೂಡ ಬಳಕೆಮಾಡಲಾಗುತ್ತಿದೆ. ಇದರ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಿವೆ.

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಹೇಗೆ ಪ್ರಸ್ತುತವಾಗಿದೆ?

ತ್ವರಿತ ಸರಳ ಸೂತ್ರಗಳನ್ನು ಬಳಸಿಕೊಂಡು ವೇದ ಗಣಿತವು ನೇರವಾಗಿ ಉತ್ತರಕ್ಕೆ ಬರುತ್ತದೆ. ಇದನ್ನು ಸಾಮಾನ್ಯ ಶಾಲೆಗಳಲ್ಲಿ ಸ್ವೀಕರಿಸಲಾಗುವುದಿಲ್ಲ (ಇದು ತಾರ್ಕಿಕ ಮತ್ತು ತರ್ಕಬದ್ಧವಾಗಿದ್ದರೂ), ಅಲ್ಲಿ ಪ್ರತಿ ಮಧ್ಯಂತರ ಹಂತ ಮತ್ತು ವಿವರವಾದ ಲೆಕ್ಕಾಚಾರವು ಕೆಲವು ಅಂಕಗಳನ್ನು ಹೊಂದಿರುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಸಾಂಪ್ರದಾಯಿಕ ವಿಧಾನದ ತಂತ್ರಗಳನ್ನು ಕರಗತ ಮಾಡಿಕೊಂಡ ನಂತರ ವೇದ ಗಣಿತವನ್ನು ಕಲಿಸುವುದು ಉತ್ತಮ.

ವಿದ್ಯಾರ್ಥಿಗಳು ತಮ್ಮ ಲೆಕ್ಕಾಚಾರದ ಸಾಮರ್ಥ್ಯ ಮತ್ತು ಮಾನಸಿಕ ಚುರುಕುತನವನ್ನು ಬಲಪಡಿಸಲು ವೇದ ಗಣಿತವನ್ನು ಕಲಿಯಬೇಕು. ಇದು ವೇಗದ ಲೆಕ್ಕಾಚಾರಗಳಿಗೆ ಸಹಾಯ ಮಾಡುತ್ತದೆ.ಇದು ಉನ್ನತ ಶ್ರೇಣಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿರುತ್ತದೆ.

ವೇದ ಗಣಿತವು ಕೇವಲ ಅಂಕಗಣಿತ ಮತ್ತು ಬೀಜಗಣಿತದ ಲೆಕ್ಕಾಚಾರಗಳನ್ನು ಒಳಗೊಳ್ಳುವುದಿಲ್ಲ, ಇದನ್ನು ಗಣಿತಶಾಸ್ತ್ರದ ಸುಧಾರಿತ ಶಾಖೆಯಲ್ಲಿ ಬಳಸಬಹುದು. ವೇದ ಗಣಿತದ ಪ್ರಯೋಜನಗಳನ್ನು ಇಡೀ ವಿಶ್ವವೇ ಸ್ವೀಕರಿಸಲು ಪ್ರಾರಂಭಿಸಿದೆ. ಅನೇಕ ಸಂಸ್ಥೆಗಳು ಈಗಾಗಲೇ ಈ ವಿಷಯವನ್ನು ಅನೌಪಚಾರಿಕವಾಗಿ ಕಲಿಸುತ್ತಿವೆ. ಆದ್ದರಿಂದ, ಶೀಘ್ರದಲ್ಲೇ ಇದನ್ನು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸಲಾಗುವುದು ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಪ್ರಾಚೀನ ಜ್ಞಾನದ ಪ್ರಯೋಜನ ಪಡೆಯಬಹುದು ಎಂದು ನಾವು ಭಾವಿಸುತ್ತೇವೆ.

ಮಕ್ಕಳ ಅನುಕೂಲಕ್ಕಾಗಿ ಇದನ್ನು ಹೇಗೆ ಬಳಸುವುದು?

ವೇದ ಗಣಿತದ ಪ್ರಯೋಜನಗಳನ್ನು ನಾವು ಈಗ ತಿಳಿದಿದ್ದೇವೆ, ಅದನ್ನು ನಮ್ಮ ಮಕ್ಕಳಿಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ? ಆದರೆ ಇದನ್ನು ಕಲಿಯಲು ಸರಿಯಾದ ವಯಸ್ಸು ಯಾವುದು? ಇದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯುವುದು ಹೇಗೆ?

ನಿಮ್ಮ ಮಗುವಿನ ವಯಸ್ಸು ಮತ್ತು ಅವರ ಗಣಿತ ಸಾಮರ್ಥ್ಯಗಳನ್ನು ನೋಡಿಕೊಂಡು, ಅವರಿಗೆ ಸರಳ ಅಂಕಗಣಿತದ ಲೆಕ್ಕಾಚಾರಗಳನ್ನುಮೊದಲು ಪರಿಚಯಿಸಿ. ವೇದ ಗಣಿತದಿಂದ ನೀವು ಉತ್ತರಗಳನ್ನು ಎಷ್ಟು ಬೇಗನೆ ಕಂಡುಹಿಡಿಯಬಹುದು ಎಂದು ಅವರಿಗೆ ತೋರಿಸಿದಾಗ, ಅದು ಅವರಿಗೆ ಮ್ಯಾಜಿಕ್ ಎಂದು ಅನಿಸುತ್ತದೆ ಮತ್ತು ಈ ವಿಷಯದ ಬಗ್ಗೆ ಅವರ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಗಣಿತದ ಪರಿಕಲ್ಪನೆಯನ್ನು ಕಲಿಯುತ್ತಿರುವ ಮಕ್ಕಳಿಗೆ, ಅದರ ಮೂಲವನ್ನು ಬಲಪಡಿಸಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ವೇದ ಗಣಿತವನ್ನು ಪರಿಚಯಿಸಬಹುದು.

ಐದನೇ ತರಗತಿ ಮಕ್ಕಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಇದನ್ನು ತಮ್ಮ ನಿಯಮಿತ ಅಧ್ಯಯನದ ಜೊತೆಗೆ ಕೋರ್ಸ್ ಆಗಿ ಕಲಿಯಬಹುದು.

ಕಲಿಯುವುದು ಹೇಗೆ?

ವೇದ ಗಣಿತದ ಕೆಲವು ತಂತ್ರಗಳನ್ನು ತೋರಿಸುವ ಕೆಲವು ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳಿವೆ. ವಿಷಯದ ಬಗ್ಗೆ ಅರಿವು ಪಡೆಯಲು ನೀವು ಆ ವೀಡಿಯೊಗಳನ್ನು ವೀಕ್ಷಿಸಬಹುದು ಮತ್ತು ಬ್ಲಾಗ್‌ಗಳನ್ನು ಓದಬಹುದು. ಮ್ಯಾಥ ಲರ್ನೆರ್ ನಲ್ಲಿ ಕೊಟ್ಟಿರುವ ವಿಷಯಗಳು ಉಪಯುಕ್ತವೆಂದು ನಾವು ಕಂಡುಕೊಂಡಿದ್ದೇವೆ.

ಸೂತ್ರಗಳ ಬಗ್ಗೆ ಸಾಮಾನ್ಯ ಜ್ಞಾನ ಬಂದಮೇಲೆ, ಹೆಚ್ಚಿನ ವಿವರಗಳಿಗಾಗಿ ನೀವು ಭಾರತಿ ಕೃಷ್ಣ ತೀರ್ಥ ಸ್ವಾಮಿಯವರ ಮೂಲ ಪುಸ್ತಕ “ವೇದ ಗಣಿತ” ವನ್ನು ಓದಬಹುದು.

ನೀವು ಸ್ವಲ್ಪ ಹೆಚ್ಚು ಖರ್ಚು ಮಾಡಲು ಸಿದ್ಧರಿದ್ದರೆ, ನಂತರ ಯಾವುದೇ ಆನ್ಲೈನ್ ಅಥವಾ ಆಫ್‌ಲೈನ್ ಕೋರ್ಸ್ ಗಳಿಗೆ ಸೇರಿಕೊಳ್ಳಬಹುದು.

You may also like...