Latest Posts, ಕನ್ನಡ ಲೇಖನಗಳು

ಪೋಷಕರು ತಿಳಿದುಕ್ಕೊಳ್ಳಬೇಕಾದ ಹೊಸ ಶಿಕ್ಷಣ ನೀತಿಯ 7 ಅಂಶಗಳು

ಕೇಂದ್ರ ಸಂಪುಟವು ಜುಲೈ 29, 2020 ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ 2020) ಗೆ ಅನುಮೋದನೆ ನೀಡಿತು. ಈ ಹೊಸ ನೀತಿಯು “ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿ” ಯನ್ನಾಗಿ ಮಾಡಲು ಬಯಸುತ್ತದೆ. ಆದ್ದರಿಂದ, ಇದು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆಗಳನ್ನು ತಂದಿದೆ.

ಮಕ್ಕಳ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು, ಶಿಕ್ಷಣ ವ್ಯವಸ್ಥೆಯಲ್ಲಿ ಮುಂಬರುವ ಬದಲಾವಣೆಗಳ ಬಗ್ಗೆ ಪೋಷಕರು ತಿಳಿದಿರಬೇಕು. ಆದ್ದರಿಂದ, ಈ ಲೇಖನದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಸ್ತಾಪಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.


1. ಶೈಕ್ಷಣಿಕ ರಚನೆಯಲ್ಲಿ ಬದಲಾವಣೆ

  • ಪ್ರಸ್ತುತ 10 + 2 (6 ರಿಂದ 18 ವರ್ಷಗಳು) ರಚನೆಯನ್ನು 5 + 3 + 3 + 4 ರ ಹೊಸ ಶಿಕ್ಷಣ ಮತ್ತು ಪಠ್ಯಕ್ರಮದ ರಚನೆಗೆ ಬದಲಾಯಿಸಲಾಗುತ್ತದೆ. ಇದು 3 ರಿಂದ 18 ವರ್ಷ ವಯಸ್ಸಿನವರನ್ನು ಒಳಗೊಳ್ಳುತ್ತದೆ.
  • ಭಾಷೆಗೆ ಪ್ರಾಮುಖ್ಯತೆಯನ್ನು ನೀಡುವುದು. ಮಾತೃಭಾಷೆ / ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ೫ ನೇ ತರಗತಿ ಅಥವಾ ೮ನೇ ತರಗತಿಯವರೆಗೆ ಶಿಕ್ಷಣವನ್ನು ನೀಡಬೇಕೆಂಬ ಸಲಹೆ. ಕನಿಷ್ಠ ಮೂರು ಭಾಷೆಗಳನ್ನು ಕಲಿಕೆಯಲ್ಲಿ ನೀಡುವ ಪ್ರಯತ್ನ. ರಾಜ್ಯಗಳು, ಪ್ರದೇಶಗಳು ಮತ್ತು ವಿದ್ಯಾರ್ಥಿಗಳಿಗೆ ಭಾಷೆಯನ್ನು ಆಯ್ಕೆ ಮಾಡುವ ಅವಕಾಶ.
  • ಪಠ್ಯಕ್ರಮದಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ದ್ವಿತೀಯ ಹಂತದಿಂದ ಅಂದರೆ ೯ನೇ ತರಗತಿಯಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯವನ್ನು ಆರಿಸಿಕೊಂಡು ಕಲಿಕಾ ಮಾರ್ಗವನ್ನು ನಿರ್ಧರಿಸಿಕೊಳ್ಳಬಹುದು. ಈ ಸೌಲಭ್ಯವು ವಿದ್ಯಾರ್ಥಿಗಳಿಗೆ ತಮ್ಮಜೀವನದ ಗುರಿಗನುಗುಣವಾದ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತದೆ.

2.ಆರಂಭಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ

  • ಪ್ರಿ – ಸ್ಕೂಲ್ ಗಳು ಮತ್ತು ಮಾಂಟೆಸ್ಸರಿ ಶಾಲೆಗಳು ಭಾರತದ ನಗರ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಆದರೆ, ಇದು ಪ್ರಸ್ತುತ 10 + 2 ರಚನೆಯ ಅಡಿಯಲ್ಲಿ ಬರುವುದಿಲ್ಲ. ಹೊಸ ನೀತಿಯು ಆರಂಭಿಕ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಿ, ಇದನ್ನು ಶಿಕ್ಷಣ ವ್ಯವಸ್ಥೆಯ ಭಾಗವಾಗಿಸುತ್ತಿದೆ.
  • ಎನ್‌ಸಿಇಆರ್‌ಟಿ ಯು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಶಿಕ್ಷಣ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತದೆ. ಇದು ಎರಡು ಉಪ-ಚೌಕಟ್ಟುಗಳನ್ನು ಹೊಂದಿರುತ್ತದೆ (0-3 ವರ್ಷಗಳು ಮತ್ತು 3-8 ವರ್ಷಗಳು). ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ತಮ ಅಭ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಈ ನೀತಿ ಮಾರ್ಗ ಸೂಚಿಗಳನ್ನು ತಯಾರು ಮಾಡಲಾಗುತ್ತದೆ.

3.ಮೌಲ್ಯಮಾಪನ ಸ್ವರೂಪದಲ್ಲಿ ಬದಲಾವಣೆ

  • ಪ್ರಸ್ತುತ ಮೌಲ್ಯಮಾಪನವು ವಿದ್ಯಾರ್ಥಿಗಳ ನೆನಪಿನ ಸಾಮರ್ಥ್ಯವನ್ನು ಪರೀಕ್ಷಿಸುವಲ್ಲಿ ಕೇಂದ್ರೀಕೃತವಾಗಿದೆ. ಇದು ವಿಷಯದ ಗ್ರಹಿಗೆಗಿಂತ ಕಂಠಪಾಠ ಮಾಡುವ ಕಲಿಕಾ ಪದ್ದತಿಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ಇದನ್ನು ರಚನಾತ್ಮಕ ಮೌಲ್ಯಮಾಪನದೊಂದಿಗೆ ಬದಲಾಯಿಸಲಾಗುತ್ತದೆ.
  • ಈ ಹೊಸ ಸ್ವರೂಪವು ವಿದ್ಯಾರ್ಥಿಗಳ ಎಲ್ಲ ರೀತಿಯ ಸಾಮರ್ಥ್ಯಗಳನ್ನುಪರೀಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ, ವಿಶ್ಲೇಷಣಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನಾ ಸ್ಪಷ್ಟತೆಯನ್ನು ಪರೀಕ್ಷಿಸುವುದು ಈ ಹೊಸ ಮೌಲ್ಯಮಾಪನಗಳ ಮುಖ್ಯ ಗುರಿಯಾಗಲಿದೆ.
  • ಎಲ್ಲಾ ಅಂಶಗಳಲ್ಲಿ ಮಗುವಿನ ಪ್ರಗತಿಯನ್ನು ವರದಿ ಮಾಡಲಾಗುತ್ತದೆ. ಈ ಕಾರಣದಿಂದಾಗಿ, ವರದಿ ಕಾರ್ಡ್‌ಗಳನ್ನು ಮರು ವಿನ್ಯಾಸಗೊಳಿಸುವ ಅವಶ್ಯಕತೆಯಿದೆ.
  • ಬೋರ್ಡ್ ಪರೀಕ್ಷೆಗಳು ತಿಂಗಳುಗಳ ತರಬೇತಿ ಮತ್ತು ಕಂಠಪಾಠಕ್ಕಿಂತ ಮುಖ್ಯ ಸಾಮರ್ಥ್ಯಗಳನ್ನು ಪರೀಕ್ಷಿಸುತ್ತದೆ. ವಿದ್ಯಾರ್ಥಿ ಅಂಕಗಳನ್ನು ಸುಧಾರಿಸಲು ಬಯಸಿದರೆ ಬೋರ್ಡ್ ಪರೀಕ್ಷೆಗಳಲ್ಲಿ 2 ಬಾರಿ (ಯಾವುದೇ ಶಾಲಾ ವರ್ಷದಲ್ಲಿ) ಕಾಣಿಸಿಕೊಳ್ಳುವ ಆಯ್ಕೆ ನೀಡಲಾಗುತ್ತದೆ.

4. ಶೈಕ್ಷಣಿಕ ವ್ಯವಸ್ಥೆಗಳ ಪ್ರಮಾಣಿತ ಮತ್ತು ಮಾನ್ಯತೆ

ಶಿಕ್ಷಣಕ್ಕೆ ಸಂಬಂಧಿಸಿದ ನೀತಿಗಳನ್ನು ಜಾರಿಗೆ ತರಲು ಶಾಲಾ ಶಿಕ್ಷಣ ನಿರ್ದೇಶನಾಲಯ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಹಂತದಲ್ಲೂ ಶಿಕ್ಷಣವನ್ನು ಸಶಕ್ತಗೊಳಿಸಲು ಪರಿಣಾಮಕಾರಿ ಸ್ವಯಂ ನಿಯಂತ್ರಣ ಅಥವಾ ಮಾನ್ಯತೆ ವ್ಯವಸ್ಥೆಯನ್ನು ಪರಿಚಯಿಸಲಾಗುವುದು.

5.ಉನ್ನತ ಶಿಕ್ಷಣದಲ್ಲಿ ಬದಲಾವಣೆ

  • ಪೂರ್ಣ ರೂಪದ ವ್ಯಕ್ತಿ ವಿಕಾಸನಕ್ಕಾಗಿ ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳಂತೆ ಬಹುತೇಕ ವಿಷಯಗಳ ಕಲಿಕೆಗೆ ಒತ್ತು.
  • ಪದವಿಪೂರ್ವ ಕೋರ್ಸ್ಗಳು ಪ್ರಮಾಣೀಕರಣಗಳೊಂದಿಗೆ ಬಹು ನಿರ್ಗಮನ ಆಯ್ಕೆಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಒಂದು ವರ್ಷದ ಕೋರ್ಸ್ ಮುಗಿಸಿದ ನಂತರ ಪ್ರಮಾಣಪತ್ರ. ಎರಡು ವರ್ಷ ಪೂರ್ಣಗೊಂಡ ನಂತರ ಡಿಪ್ಲೊಮಾ. ಮೂರು ವರ್ಷ ಪೂರ್ಣಗೊಂಡ ನಂತರ ಸ್ನಾತಕೋತ್ತರ ಪದವಿ. ವಿದ್ಯಾರ್ಥಿಯು ನಾಲ್ಕು ವರ್ಷದ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರೆ ಸಂಶೋದನೆಯೊಂದಿಗೆ ಪದವಿ.
  • ಹಾಗೆಯೆ ಮಾಸ್ಟರ್ ಪದವಿ ಕಾರ್ಯಕ್ರಮಗಳಲ್ಲಿಕೆಲವೊಂದು ಅನುಕೂಲಕರ ಆಯ್ಕೆಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ವಿದ್ಯಾರ್ಥಿಯು ಮೂರು ವರ್ಷದ ಬ್ಯಾಚುಲರ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರೆ, ಎರಡು ವರ್ಷವನ್ನು ಸಂಪೂರ್ಣ ಸಂಶೋಧನಾ ಕಾರ್ಯಕ್ರಮಕ್ಕೆ ಮೀಸಲಿಡಲಾಗಿದೆ. ಸಂಶೋಧನೆಯೊಂದಿಗೆ ನಾಲ್ಕು ವರ್ಷದ ಬ್ಯಾಚುಲರ್ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ, ಒಂದು ವರ್ಷದ ಮಾಸ್ಟರ್ ಕಾರ್ಯಕ್ರಮವಿರಬಹುದು. ಸಂಯೋಜಿತ 5 ವರ್ಷದ ಬ್ಯಾಚುಲರ್ / ಸ್ನಾತಕೋತ್ತರ ಕಾರ್ಯಕ್ರಮ ಇರಬಹುದು.
  • ಎಂ.ಫಿಲ್. ಪ್ರೋಗ್ರಾಂ ಅನ್ನು ನಿಲ್ಲಿಸಲಾಗುವುದು.
  • ಪ್ರಸ್ತುತ ಉನ್ನತ ಶಿಕ್ಷಣವನ್ನು ನೀಡುವ ವಿದ್ಯಾ ಸಂಸ್ಥೆಗಳು ಏಕ ವಿಷಯದ ಮೇಲೆ ಕೇಂದ್ರೀಕೃತಗೊಂಡಿವೆ. ಉದಾಹರಣೆಗೆ ತಾಂತ್ರಿಕ ವಿದ್ಯಾಲಯಗಳು. ಇನ್ನು ಮುಂದೆ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಉನ್ನತ ಶಿಕ್ಷಣವನ್ನು ನೀಡುವ ಸಂಸ್ಥೆಗಳು ಬಾಹುವಿಷಯಗಳ ಮೇಲೆ ಶಿಕ್ಷಣವನ್ನುನೀಡುವಂತೆ ಮಾರ್ಪಾಟು ಮಾಡಲಾಗುತ್ತದೆ. ಬಹುಶ ೨೦೩೦ ರ ವೇಳೆಗೆ ಎಲ್ಲ ಸಂಸ್ಥೆಗಳು ಈ ನಿಟ್ಟಿನಲ್ಲಿ ಮಾರ್ಪಾಟುಗೊಳ್ಳಲಿವೆ.
  • ಸೈನ್ಸ್, ಆರ್ಟ್ಸ್, ಕಾಮರ್ಸ್ ಎಂಬ ವಿಂಗಡಣೆ ಇರುವುದಿಲ್ಲ. ಅಂದರೆ ತಾಂತ್ರಿಕ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿ ಇತಿಹಾಸವನ್ನು ಜೊತೆಯಲ್ಲಿ ಓದಬಹುದು. ಆರ್ಟ್ಸ್ ಓದುತ್ತಿರುವ ವಿದ್ಯಾರ್ಥಿಗಳು ಗಣಿತ ಅಥವಾಭೌತಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಬಹುದು.

6.ಶಿಕ್ಷಣದ ಅಂತರರಾಷ್ಟ್ರೀಕರಣ

ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಭಾರತದ ಪ್ರತಿಭೆಗಳು ಬೇರೆ ದೇಶಗಳಿಗೆ ವಲಸೆ ಹೋಗುವುದನ್ನು ನಾವೆಲ್ಲ ನೋಡಿದ್ದೇವೆ. ಸರಿಯಾದ ರೀತಿಯಲ್ಲಿ ಕಾರ್ಯಗತ ಮಾಡಿದರೆ, ಶಿಕ್ಷಣದ ಅಂತರಾಷ್ಟ್ರೀಕರಣವು ಇಂತಹ ಪ್ರತಿಭೆಗಳನ್ನು ಇಲ್ಲೇ ಉಳಿಸಿಕ್ಕೊಳ್ಳುವಲ್ಲಿ ಸಹಾಯ ಮಾಡಬುಹುದು.

ಶಿಕ್ಷಣ ನೀತಿಯಲ್ಲಿ ಒತ್ತು ಕೊಟ್ಟಿರುವ ಅಂಶಗಳು ಹೀಗಿವೆ:

  • ಭಾರತವನ್ನು ಜಾಗತಿಕ ಅಧ್ಯಯನ ತಾಣವಾಗಿ ಉತ್ತೇಜಿಸಲು ಕೈಗೆಟುಕುವ ವೆಚ್ಚದಲ್ಲಿ ಉತ್ತಮ ಶಿಕ್ಷಣವನ್ನು ಒದಗಿಸುವುದು.
  • ಬೇರೆ ದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ವಿದೇಶಿ ವಿದ್ಯಾರ್ಥಿ ಕಚೇರಿಗಳನ್ನು ಸ್ಥಾಪಿಸುವುದು.
  • ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಭಾರತೀಯ ಸಂಸ್ಥೆಗಳನ್ನು ಇತರ ದೇಶಗಳಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತದೆ. ಇದೇ ರೀತಿ, ಇತರ ದೇಶಗಳಿಂದ ಆಯ್ದ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.
  • ಭಾರತೀಯ ಮತ್ತು ಜಾಗತಿಕ ಸಂಸ್ಥೆಗಳ ನಡುವಿನ ಸಂಶೋಧನಾ ಸಹಯೋಗ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ವಿಶೇಷ ಪ್ರಯತ್ನಗಳ ಮೂಲಕ ಉತ್ತೇಜಿಸಲಾಗುವುದು.

7.ಭಾರತೀಯ ಭಾಷೆಗಳು, ಕಲೆ ಮತ್ತು ಸಂಸ್ಕೃತಿಯ ಪ್ರಚಾರ

ಭಾರತವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ವೈವಿಧ್ಯಮಯ ಭೂಮಿಯಾಗಿದೆ. ಆದರೆ, ಮುಂದಿನ ಪೀಳಿಗೆಗೆ ಅದು ಉತ್ತಮವಾಗಿ ಪ್ರತಿನಿಧಿಸಲ್ಪಟ್ಟಿದೆಯೇ ಮತ್ತು ಸಂರಕ್ಷಿಸಲ್ಪಟ್ಟಿದೆಯೇ? ನಮ್ಮ ಶ್ರೀಮಂತ ಸಂಸ್ಕೃತಿ ಪಾಶ್ಚಿಮಾತ್ಯ ಪ್ರಭಾವದ ಅಡಿಯಲ್ಲಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ, ‘ಭಾರತೀಯ ಸಾಂಸ್ಕೃತಿಕ ಸಂಪತ್ತಿನ ಸಂರಕ್ಷಣೆ ಮತ್ತು ಪ್ರಚಾರ’ದ ತುರ್ತು ಅವಶ್ಯಕತೆಯಿದೆ.

ಹೊಸ ಶಿಕ್ಷಣ ನೀತಿಯು ಈ ಅಂಶವನ್ನು ಗಮನಕ್ಕೆ ತೆಗೆದುಕೊಂಡು, ಶಿಕ್ಷಣದ ಎಲ್ಲಾ ಹಂತಗಳಲ್ಲಿ ಭಾರತೀಯ ಭಾಷೆಗಳು, ಕಲೆ ಮತ್ತು ಸಂಸ್ಕೃತಿಯ ಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಉತ್ತೇಜಿಸುವ ವಿವಿಧ ಯೋಜನೆಗಳನ್ನು ಒಳಗೊಂಡಿದೆ.

You may also like...