Latest Posts, ಕನ್ನಡ ಲೇಖನಗಳು

ಮಕ್ಕಳ ಜೀವನದಲ್ಲಿ ಮಾತೃಭಾಷೆಯ ಪ್ರಾಮುಖ್ಯತೆ

ಜಾಗತೀಕರಣವು ಉತ್ತುಂಗಕ್ಕೇರಿರುವುದರಿಂದ ಮತ್ತು ಅಂತರರಾಷ್ಟ್ರೀಯ ಶಾಲೆಗಳು ಹೆಚ್ಚಾಗುತ್ತಿರುವುದರಿಂದ, ಸಮಾಜಿಕವಾಗಿ ನಾವು ವಿದೇಶಿ ಭಾಷೆಗಳತ್ತ ಹೆಚ್ಚು ಒಲವು ತೋರುತ್ತಿದ್ದೇವೆ. ಇದರ ಪರಿಣಾಮವಾಗಿ ಮಾತೃಭಾಷೆ ನಮ್ಮ ಮಗುವಿನ ಜೀವನದಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಮಾತೃಭಾಷೆಯ ಪಾತ್ರ ಬಹಳ ಮುಖ್ಯ, ಅದು ಅವರನ್ನು ಅವರ ಸಂಸ್ಕ್ರತಿಯೊಂದಿಗೆ ಬೆಸೆಯುತ್ತದೆ. ಈ ಲೇಖನದಲ್ಲಿ ಮಗುವಿನ ಜೀವನದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ಚರ್ಚಿಸೋಣ.

ಮಾತೃಭಾಷೆಯ ಬಗ್ಗೆ ಜಾಗೃತಿ

ಬಾಲ್ಯದ ಶಿಕ್ಷಣವು ಮಾತೃಭಾಷೆಯಿಂದ ಪ್ರಾರಂಭವಾಗಬೇಕು ಎಂದು ಯುನೆಸ್ಕೋ ನಂಬಿದೆ. ಫೆಬ್ರವರಿ 21 ಅನ್ನು ಯುನೆಸ್ಕೋ ಅಂತರರಾಷ್ಟ್ರೀಯ ಮಾತೃಭಾಷಾ ದಿನವೆಂದು ಘೋಷಿಸಿದೆ. ಭಾಷಾ ವೈವಿಧ್ಯತೆಯನ್ನು ಕಾಪಾಡಲು ಮತ್ತು ಬಹುಭಾಷಾ ಸಿದ್ಧಾಂತವನ್ನು ಉತ್ತೇಜಿಸಲು ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

ಇತ್ತೀಚೆಗೆ, ಜನರು ತಮ್ಮ ಮಾತೃಭಾಷೆಯನ್ನು ಸಂರಕ್ಷಿಸುವ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಮಾತೃಭಾಷೆಗೆ ಪ್ರಾಮುಖ್ಯತೆ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಸ್ವಾಭಾವಿಕವಾಗಿ, ಈ ಅರಿವು ಶಿಕ್ಷಣ ಕ್ಷೇತ್ರಕ್ಕೂ ವರ್ಗಾಯಿಸಲ್ಪಟ್ಟಿದೆ. ಒಂದು ಉತ್ತಮ ಉದಾಹರಣೆಯೆಂದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(ಎನ್‌ಇಪಿ ೨೦೨೦) ಮಾತೃಭಾಷೆಯ ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಿರುವುದು ಮತ್ತು ಆ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ತಂದಿರುವುದು.

ಮಾತೃಭಾಷೆ ಏಕೆ ಮುಖ್ಯವಾಗಿದೆ ಮತ್ತು ಅದರ ಪ್ರಯೋಜನಗಳು

  • ಸಾಕ್ಷರತೆ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ: ಶಿಶುಗಳು ಹುಟ್ಟುವ ಮೊದಲೇ ಮಾತೃಭಾಷೆಗೆ ಒಗ್ಗಿಕೊಂಡಿರುತ್ತಾರೆ. ಆದ್ದರಿಂದ, ಅವರು ಭಾಷೆಯನ್ನು ಸುಲಭವಾಗಿ ಗ್ರಹಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಮಾತೃಭಾಷೆಯ ಬಲವಾದ ಅಡಿಪಾಯ, ಇತರ ಭಾಷೆಗಳನ್ನು ಕಲಿಯಲು ಅಗತ್ಯವಾದ ಕೌಶಲ್ಯಗಳನ್ನು ಅವರಿಗೆ ಕೊಡುತ್ತದೆ.
  • ಅರಿವಿನ ಕೌಶಲ್ಯಗಳನ್ನು ಸುಧಾರಿಸುತ್ತದೆ: ಮಗು ಎರಡನೇ ಭಾಷೆಯನ್ನು ಕಲಿಯಲು ಪ್ರಾರಂಭಿಸಿದಾಗ ಮಾತೃಭಾಷೆಯನ್ನು ಕಲಿಯುವಾಗ ಮಗು ಅಭಿವೃದ್ಧಿಪಡಿಸಿಕೊಂಡ ಕೌಶಲ್ಯಗಳು ಸಹಾಯಕ್ಕೆ ಬರುತ್ತವೆ. ಉದಾಹರಣೆಗೆ – ಗೂಡಾರ್ಥವನ್ನು ಗ್ರಹಿಸುವುದು, ಕೊಟ್ಟಿರುವ ಸಂದರ್ಭವನ್ನು ಬಳಸಿಕೊಂಡು ಪದದ ಅರ್ಥವನ್ನು ಊಹಿಸುವುದು, ಇತ್ಯಾದಿ.
  • ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಸಂಪರ್ಕ: ಭಾಷೆಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಪರಸ್ಪರ ಸಂಬಂಧ ಹೊಂದಿವೆ. ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರವೀಣರಾಗಿದ್ದರೆ ಮಾತ್ರ ತಮ್ಮ ಸಂಸ್ಕೃತಿಯನ್ನು ನಿಜವಾಗಿಯೂ ಮೆಚ್ಚಬಹುದು ಮತ್ತು ಗೌರವಿಸಬಹುದು. ಮಾತೃಭಾಷೆಯಲ್ಲಿ ಬಲವಾದ ಅಡಿಪಾಯವನ್ನು ಹೊಂದಿರುವುದು ಅವರ ಸಾಂಸ್ಕೃತಿಕ ಗುರುತನ್ನು ಬಲಪಡಿಸುತ್ತದೆ ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
  • ಶೈಕ್ಷಣಿಕ ಯಶಸ್ಸು: ಸಂಶೋಧನೆಗಳ ಪ್ರಕಾರ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವುದರಿಂದ ಮಕ್ಕಳು ತಮ್ಮ ಪಠ್ಯಕ್ರಮದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದುತ್ತಾರೆ. ಇದು ಮಗುವಿಗೆ ವಿಷಯಗಳನ್ನು ಗ್ರಹಿಸಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿಸುತ್ತದೆ. ಆದ್ದರಿಂದ ತ್ವರಿತ ಕಲಿಕೆಯನ್ನು ಬೆಂಬಲಿಸುತ್ತದೆ ಮತ್ತು ಅವರಿಗೆ ಶೈಕ್ಷಣಿಕ ಯಶಸ್ಸನ್ನು ತರುತ್ತದೆ.
  • ಕುಟುಂಬ ಬಂಧ ಮತ್ತು ಸುರಕ್ಷಿತ ಭಾವನೆ: ಮಗುವು ಮಾತೃಭಾಷೆಯ ಮಾಧ್ಯಮದಲ್ಲಿ ಕಲಿಯುತ್ತಿದ್ದರೆ, ಅವರು ಅಗತ್ಯವಿದ್ದಾಗ ಪೋಷಕರ ಅಥವಾ ಮನೆಯ ಹಿರಿಯರ ಬಳಿ ಸಹಾಯ ಪಡೆದುಕೊಳ್ಳಬಹುದು. ಇದರಿಂದ ಮನೆಯ ಸದಸ್ಯರ ಜೊತೆ ಒಳ್ಳೆಯ ರೀತಿಯಲ್ಲಿ ಸಮಯ ಕಳೆಯಲು ಅನುಕೂಲವಾಗುತ್ತದೆ ಮತ್ತು ಇದು ಮಗುವಿಗೆ ಸುರಕ್ಷಿತ ಭಾವನೆಯ ಪ್ರಜ್ಞೆಯನ್ನು ನೀಡಿ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
  • ಬಹುಭಾಷಾ ಸಿದ್ಧಾಂತ: ವಲಸೆಯ ಹೆಚ್ಚಳದಿಂದಾಗಿ, ಬಹು ಭಾಷೆಗಳನ್ನು ತಿಳಿದುಕೊಳ್ಳುವುದು ಇಂದಿನ ಕೆಲಸದ ವಾತಾವರಣದಲ್ಲಿ ಒಂದು ಪ್ಲಸ್ ಪಾಯಿಂಟ್ ಎಂದು ಪರಿಗಣಿಸಲಾಗಿದೆ. ಬಹು ಭಾಷೆಗಳನ್ನು ಕಲಿಯಲು ಒಬ್ಬರು ಉತ್ತಮ ಸಾಕ್ಷರತೆ ಕೌಶಲ್ಯ ಮತ್ತು ಮಾತೃಭಾಷೆಯಲ್ಲಿ ಬಲವಾದ ಅಡಿಪಾಯವನ್ನು ಹೊಂದಿರಬೇಕು.

ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಮಾತೃಭಾಷೆಯ ಬಲವಾದ ಅಡಿಪಾಯವನ್ನು ನೀಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು. ಇದು ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಲು ಸಹಾಯ ಮಾಡುವುದಲ್ಲದೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

You may also like...