“ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಿ ಸುಂದರ ಮನಸ್ಸುಗಳ ರಾಷ್ಟ್ರವಾಗಬೇಕಾದರೆ, ಮೂರು ಪ್ರಮುಖ ಸಾಮಾಜಿಕ ಸದಸ್ಯರ ಪಾತ್ರ ಮುಖ್ಯವಾಗುತ್ತದೆ. ಅವರು ತಂದೆ, ತಾಯಿ ಮತ್ತು ಶಿಕ್ಷಕರು”
~ಡಾ. ಎಪಿಜೆ ಅಬ್ದುಲ್ ಕಲಾಂ
ಮೇಲಿನ ಉಲ್ಲೇಖವು ರಾಷ್ಟ್ರ ನಿರ್ಮಾಣದಲ್ಲಿ ಪೋಷಕರ ಪಾತ್ರವನ್ನು ಸೂಚಿಸುತ್ತದೆ. ಜವಾಬ್ದಾರಿಯುತ ಉತ್ತಮ ಪ್ರಜೆಗಳನ್ನು ದೇಶಕ್ಕೆ ನೀಡಲು ನಾವು ಮಕ್ಕಳಲ್ಲಿ ದೇಶಪ್ರೇಮದ ಬೀಜವನ್ನು ಬಿತ್ತಬೇಕು. ನಮ್ಮ ದೇಶ ಈ ವರ್ಷ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಈ ಸಂಧರ್ಭದಲ್ಲಿ ಮಕ್ಕಳಲ್ಲಿ ದೇಶಭಕ್ತಿಯನ್ನು ಹೇಗೆ ಬೆಳೆಸುವುದು ಎಂಬುದರ ಕುರಿತು ಒಂದು ಚಿಂತನೆ.

ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಿ: ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಕೆಲವು ಕಾರಣಗಳಿವೆ. ಹೆಚ್ಚಿನ ಖಾಸಗಿ ಶಾಲೆಗಳಲ್ಲಿ ರಾಷ್ಟೀಯ ಹಬ್ಬದ ಆಚರಣೆಯನ್ನು ಸರಿಯಾಗಿ ಮಾಡದೇ ಮಕ್ಕಳಿಗೆ ರಜೆ ಘೋಷಣೆ ಮಾಡಿ ಬಿಡುತ್ತಾರೆ. ಈ ಕಾರಣದಿಂದಾಗಿ, ಅನೇಕ ಮಕ್ಕಳು ನಮ್ಮ ದೇಶದ ಇತಿಹಾಸವನ್ನು ತಿಳಿಯುವ ಮತ್ತು ಅದನ್ನು ನೆನಪಿಸಿಕ್ಕೊಳ್ಳುವ ಅವಕಾಶದಿಂದ ವಂಚಿತರಾಗುತ್ತಾರೆ. ಅವರಿಗೆ ಇದು ಇನ್ನೊಂದು ರಜೆಯ ದಿನವಾಗಿ ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಮಕ್ಕಳು ಶಾಲಾ ಆಚರಣೆಗಳಲ್ಲಿ ಭಾಗವಹಿಸದಿದ್ದರೆ, ನಾವು ನಮ್ಮ ಮಕ್ಕಳಿಗೆ ರಾಷ್ಟ್ರೀಯ ಹಬ್ಬಗಳ ಬಗ್ಗೆ ಶಿಕ್ಷಣ ನೀಡಬಹುದು. ಇಲ್ಲಿ ಕೆಲವು ಸಲಹೆಗಳಿವೆ:
- ಇದು ಒಂದು ವಿಶೇಷವಾದ ದಿನ ಎಂಬಂತಹ ವಾತಾವರಣವನ್ನು ಮನೆಯಲ್ಲಿಯೇ ಸೃಷ್ಟಿ ಮಾಡಿ.
- ಬೆಳಿಗ್ಗೆ ಬೇಗನೆ ಎದ್ದು ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯುವ ಚಟುವಟಿಕೆಗಳನ್ನು ದೂರದರ್ಶನದಲ್ಲಿ ಅವರಿಗೆ ತೋರಿಸಿ.
- ಧ್ವಜಾರೋಹಣ ಮಾಡುವ ಯಾವುದೇ ಹತ್ತಿರದ ಸ್ಥಳಗಳು/ಸರ್ಕಾರಿ ಶಾಲೆಗಳು/ಅಪಾರ್ಟ್ಮೆಂಟ್ ಆವರಣಗಳಿಗೆ ಅವರನ್ನು ಕರೆದೊಯ್ಯುವ ಪ್ರಯತ್ನ ಮಾಡಿ.
- ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಿ. ಇದರಿಂದ ಮಕ್ಕಳು ದೇಶದ ಹಿರಿಮೆಯ ಬಗ್ಗೆ ಕೆಲವೊಂದು ವಿಷಯಗಳನ್ನು ಕಲಿಯಲು ನೆರವಾಗುತ್ತದೆ. ಆನ್‌ಲೈನ್ ಅವಕಾಶಗಳು ಈ ಕೂಡ ಉದ್ದೇಶವನ್ನು ಪೂರೈಸುತ್ತವೆ.
- ಎಲ್ಲಕ್ಕಿಂತ ಮುಖ್ಯವಾಗಿ, ಇದನ್ನು ಏಕೆ ಆಚರಿಸಲಾಗುತ್ತದೆ ಮತ್ತುಆ ದಿನದ ಮಹತ್ವ ಏನು ಎಂಬುದನ್ನು ವಿವರಿಸಿ.
ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ: ನಮ್ಮದು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ. ಇದು ಅನೇಕ ಧಾಳಿಗಳನ್ನು ಎದುರಿಸಿ ತಲೆಯೆತ್ತಿ ನಿಂತಿದೆ. ಭಾರತದ ಪ್ರತಿಯೊಂದು ಮಗುವು ಇದರ ಬಗ್ಗೆ ತಿಳಿದುಕೊಳ್ಳಬೇಕು. ಒಮ್ಮೆ ವಸಾಹತುಶಾಹಿಯ ಬಲಿಪಶುವಾಗ್ಗಿದ್ದ ಭಾರತ, ಇಂದು ಹೇಗೆ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎನ್ನುವುದನ್ನು ನಮ್ಮ ಯುವಕರು ಅರ್ಥಮಾಡಿಕೊಳ್ಳಬೇಕು. ಈ ಕಥೆಯನ್ನು ನಮ್ಮ ಮಕ್ಕಳಿಗೆ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ. ಈ ಪೀಳಿಗೆಯ ಮಕ್ಕಳು ತುಂಬಾ ಬುದ್ಧಿವಂತರು. ಅವರಿಗೆ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶಗಳೂ ಹೆಚ್ಚು. ಇಂಟರ್ನೆಟ್ ಮೊಬೈಲ್ ತಂತ್ರಜ್ಞಾನಗಳು ಇವಕ್ಕೆ ಪೂರಕವಾಗಿವೆ. ಹೀಗಾಗಿ ನಾವು ಮಕ್ಕಳು ಸರಿಯಾದ ಮತ್ತು ಸತ್ಯವಾದ ಮಾಹಿತಿಯನ್ನುಪಡೆಯುತ್ತಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸರಿಯಾದ ಪುಸ್ತಕಗಳನ್ನುಅವರಿಗಾಗಿ ಖರೀದಿಸಿ. ನಮ್ಮ ಸ್ವಾತಂತ್ರ್ಯ ಹೋರಾಟದ ಕಥೆಗಳು, ನಮ್ಮ ನಾಯಕರು ಮತ್ತು ಪ್ರಪಂಚಕ್ಕೆ ಭಾರತದ ನೀಡಿರುವ ಕೊಡುಗೆಗಳ ಬಗ್ಗೆ ತಿಳಿಸಿಕೊಡಿ.
- ಮಕ್ಕಳನ್ನು ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಕರೆದೊಯ್ಯಿರಿ. ಭಾರತದ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆಯಲು ಸಹಾಯವಾಗುವಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಉದಾ: ಸಿಬಿಎಸ್‌ಇ ಪ್ರತಿವರ್ಷ ವಿದ್ಯಾರ್ಥಿಗಳಿಗೆ ನಡೆಸುವ ಪರಂಪರೆಯ ರಸಪ್ರಶ್ನೆ.
- ದೇಶದ ಬಗ್ಗೆ ಗೌರವ ಮೂಡಿಸುವಂತಹ ಚಲನಚಿತ್ರಗಳನ್ನು ಅವರಿಗೆ ತೋರಿಸಿ.
- ನಿಮ್ಮ ಮಕ್ಕಳಿಗೆ ಭಾರತದ ಬಗ್ಗೆ ಉತ್ತಮ ಕಥೆಗಳನ್ನು ಹೇಳಲು ಈ ಅದ್ಭುತ ವೆಬ್‌ಸೈಟ್ ಮೈ ಇಂಡಿಯಾ ಮೈ ಪ್ರೈಡ್ ಅನ್ನು ನೋಡಿ.
ಅಂತರಾಷ್ಟ್ರೀಯ ಕ್ರೀಡಾಕೂಟಗಳು:
ಕ್ರೀಡೆಗೆ ದೇಶಭಕ್ತಿಯನ್ನು ಪ್ರಚೋದಿಸುವ ಸಾಮರ್ಥ್ಯವಿದೆ. ಇದು ವಿವಿಧ ಜಾತಿ, ಧರ್ಮ ಮತ್ತು ಪ್ರಾಂತ್ಯದ ಜನರನ್ನು ಒಂದು ರಾಷ್ಟ್ರವಾಗಿ ಹಿಡಿದಿಡುತ್ತದೆ. ವಿಜಯದ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ಎತ್ತಿದಾಗ ಇಡೀ ದೇಶವು ಒಂದುಗೂಡಿ ಸಂಭ್ರಮಿಸುತ್ತದೆ.
ಪ್ರಮುಖ ಕ್ರೀಡಾಕೂಟಗಳಲ್ಲಿ ಟೀಮ್ ಇಂಡಿಯಾವನ್ನು ನಾವು ಹೇಗೆ ಹುರಿದುಂಬಿಸುತ್ತೇವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದು ರಾಷ್ಟ್ರೀಯತೆಯ ಬಲವಾದ ಭಾವನೆಯನ್ನು ತರುತ್ತದೆ. ಇತ್ತೀಚಿನ ಉದಾಹರಣೆಯೆಂದರೆ ಟೋಕಿಯೊ ಒಲಿಂಪಿಕ್ಸ್ 2020, ಅಲ್ಲವೇ? ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಇಂತಹ ಕ್ರೀಡಾಕೂಟಗಳಲ್ಲಿ ಆಸಕ್ತಿ ಬೆಳೆಸಿ. ಇದು ದೇಶದ ಮೇಲೆ ಪ್ರೀತಿ ಮತ್ತು ಹೆಮ್ಮೆಯನ್ನು ಬೆಳೆಸುತ್ತದೆ. ತಾನೂ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂದು ಅವರನ್ನು ಪ್ರೇರೇಪಿಸುತ್ತದೆ.
ನೀವೇ ಉದಾಹರಣೆಯಾಗಿ ಪ್ರೇರೇಪಿಸಿ:
ಒಂದು ಮಾತಿದೆ – “ಮಕ್ಕಳು ದೊಡ್ಡ ಅನುಕರಣಕಾರರು. ಆದ್ದರಿಂದ ಅವರಿಗೆ ಅನುಕರಿಸಲು ಉತ್ತಮವಾದದ್ದನ್ನು ನೀಡಿ. ” ಎಂದು. ನಿಮ್ಮ ಮಗುವಿನಲ್ಲಿ ದೇಶಭಕ್ತಿಯನ್ನು ಬೆಳೆಸಲು ನೀವು ಅವರಿಗೆ ಉದಾಹರಣೆಯಾಗಬೇಕು.
- ಯಾವಾಗಲೂ ದೇಶದ ಬಗ್ಗೆ ಗೌರವದಿಂದ ಮಾತನಾಡಿ.
- ಕಾನೂನು ಪಾಲಿಸುವ ಒಳ್ಳೆಯ ಪ್ರಜೆಯಾಗಿ ಮಕ್ಕಳನ್ನು ಬೆಳೆಸಿ. ಉದಾ: ಟ್ರಾಫಿಕ್ ನಿಯಮಗಳನ್ನು ಅನುಸರಿಸುವುದು, ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವುದು, ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು, ರಾಷ್ಟ್ರೀಯ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಇತ್ಯಾದಿ.
- ರಾಷ್ಟ್ರದ ಕಡೆಗೆ ಅವರ ಕರ್ತವ್ಯಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಿ.
- ಭಾರತದ ಸಂವಿಧಾನವನ್ನು ಅನುಸರಿಸಿ ಮತ್ತು ನಿಮ್ಮ ಮಕ್ಕಳಿಗೆ ಅದರ ಬಗ್ಗೆ ಶಿಕ್ಷಣ ನೀಡಿ.
- ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಿ. ಅದರ ಶಿಷ್ಟಾಚಾರಗಳ ಬಗ್ಗೆ ನಿಮ್ಮ ಮಕ್ಕಳಿಗೆ ಕಲಿಸಿ.
- ಮಕ್ಕಳ ಮುಂದೆ ಭಾರತೀಯ ಸೇನೆಯ ಧೈರ್ಯ ಮತ್ತು ಅತ್ಯುನ್ನತ ತ್ಯಾಗದ ಬಗ್ಗೆ ಮಾತನಾಡಿ.
- ನಿಮ್ಮ ಮಕ್ಕಳೊಂದಿಗೆ ದೇಶಭಕ್ತಿಯ ಭಾವನೆಗಳನ್ನು ಮೂಡಿಸುವ ಚಲನಚಿತ್ರಗಳು, ವೀಡಿಯೊಗಳು ಅಥವಾ ಯಾವುದೇ ಇತರ ಕಾರ್ಯಕ್ರಮಗಳನ್ನು ವೀಕ್ಷಿಸಿ.
ನೀವು ಇಂದು ಮಾಡುವ ಈ ರೀತಿಯ ಸಣ್ಣ ಪ್ರಯತ್ನಗಳು ನಾಳೆಯ ಭಾರತ ನಿರ್ಮಾಣದಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಬಹುದು. ಈ ರೀತಿಯ ಚಿಕ್ಕ ಚಿಕ್ಕ ಬದಲಾವಣೆಗಳು ಮಕ್ಕಳಲ್ಲಿ ಚಿಂತನೆಯ ಪ್ರಕ್ರಿಯೆಯನ್ನು ಪ್ರೇರೇಪಿಸಿ ಅವರ ಜ್ಞಾನವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತವೆ. ದೇಶದ ಬಗ್ಗೆ ಪ್ರೀತಿ ಮತ್ತು ಗೌರವವನ್ನು ಬೆಳೆಸುತ್ತವೆ.