Latest Posts, ಕನ್ನಡ ಲೇಖನಗಳು

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು ಹೇಗೆ?

“ದೇಶ ಸುತ್ತು, ಕೋಶ ಓದು” ಎಂಬ ಗಾದೆಯನ್ನು ನೀವೆಲ್ಲ ಕೇಳಿರುತ್ತೀರಿ. ಜ್ಞಾನವನ್ನು ಗಳಿಸಲು ಪುಸ್ತಕಗಳು ಎಷ್ಟು ಮುಖ್ಯ ಎಂಬುದನ್ನು ಈ ಗಾದೆ ತಿಳಿಸುತ್ತದೆ. ಮಕ್ಕಳ ಜ್ಞಾನ ವಿಕಾಸಕ್ಕಾಗಿ ನಾವು ಅವರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಬೇಕು ಮತ್ತು ಅವರಲ್ಲಿ ಪುಸ್ತಕಗಳ ಮೇಲೆ ಪ್ರೀತಿ ಬೆಳೆಸಬೇಕು. ಬನ್ನಿ, ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೇಗೆ ಬೆಳೆಸಬಹುದು ಎಂಬುದರ ಕುರಿತು ತಿಳಿದುಕೊಳ್ಳೋಣ.

ಮಕ್ಕಳು ಏಕೆ ಓದುವ ಆಸಕ್ತಿ ಬೆಳೆಸಿಕ್ಕೊಳಬೇಕು?

  • ಓದುವ ಹವ್ಯಾಸವು ಕೇವಲ ಶೈಕ್ಷಣಿಕ ಯಶಸ್ಸಿಗೆ ಮಾತ್ರವಲ್ಲ, ಇದು ವ್ಯಕ್ತಿತ್ವ ವೃದ್ಧಿಗೆ ಸಹಾಯ ಮಾಡುತ್ತದೆ. ಇದು ಮಗುವಿನ ಶಬ್ದಕೋಶವನ್ನು ಸುಧಾರಿಸುತ್ತದೆ ಮತ್ತು ಅವರ ವಾಕ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಓದುವ ಹವ್ಯಾಸ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಮುಂದೆ ಬೆಳೆದು ದೊಡ್ಡವರಾದಾಗ ಸಮಾಜವನ್ನು ಎದುರಿಸಲು ಸಹಾಯಕವಾಗುತ್ತದೆ.
  • ನಿಯಮಿತವಾಗಿ ಓದುವುದು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಹಾಗು ಮಗುವಿನ ಕಲ್ಪನಾಶಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸುತ್ತದೆ. ಇದು ಮಗುವಿನ ಸೃಜನಶೀಲತೆಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ.
  • ಮಕ್ಕಳಿಗೆ ಸಾಮಾನ್ಯವಾಗಿ ಹೆಚ್ಚು ಹೊತ್ತು ಒಂದೇ ಕಡೆ ಗಮನವನ್ನು ಕೇಂದ್ರೀಕರಿಸಲು ಆಗುವುದಿಲ್ಲ. ಒಳ್ಳೆಯ ಪುಸ್ತಕಗಳು ಅವರ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.
  • ಓದುವ ಹವ್ಯಾಸದಿಂದ ಮಕ್ಕಳಿಗೆ ತಮ್ಮ ಶೈಕ್ಷಣಿಕ ಪುಸ್ತಕಗಳನ್ನು ಓದಿ ಗ್ರಹಿಸಿಕೊಳ್ಳುವುದು ಸುಲಭವಾಗುತ್ತದೆ. ಹೊಸ ಹೊಸ ವಿಚಯಗಳನ್ನು ಕಲಿಯಲು ಸಹ ಇದು ಅನುಕೂಲವಾಗುತ್ತದೆ.
  • ಪುಸ್ತಕಗಳು ಜೀವನಕ್ಕೆ ಸ್ನೇಹಿತರಾಗಬಹುದು. ಇದು ಬೇಸರವನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸುತ್ತದೆ.
  • ಇತ್ತೀಚಿನ ದಿನಗಳಲ್ಲಿ ಮಕ್ಕಳು ಟಿವಿ ಅಥವಾ ಮೊಬೈಲ್ ಫೋನ್ ಗಳನ್ನು ನೋಡಿ ಸಮಯ ಹಾಳು ಮಾಡುವುದು ಕಂಡು ಬರುತ್ತದೆ. ಪುಸ್ತಕಗಳ ಮೇಲೆ ಪ್ರೀತಿ ಬೆಳೆಸಿಕೊಂಡರೆ, ಇಂತಹ ಅಭ್ಯಾಸದಿಂದ ಹೊರಗೆ ಬರಲು ಸಹಾಯವಾಗುತ್ತದೆ.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಕೆಲವು ಸಲಹೆಗಳು

ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬೆಳೆಸುವುದು ಒಂದು ಒಳ್ಳೆಯ ಅನುಭವವನ್ನು ನೀಡುತ್ತದೆ. ನೀವೇ ಪ್ರಯತ್ನಿಸಿ ನೋಡಿ.

ಪುಸ್ತಕಗಳಿಗೆ ಆರಂಭಿಕ ಮಾನ್ಯತೆ :ಮಕ್ಕಳಿಗೆ ಪುಸ್ತಕಗಳೊಂದಿಗೆ ನಂಟು ಬೆಳೆಸಲು ನೀವು ಸರಿಯಾದ ಸಮಯಕ್ಕಾಗಿ ಕಾಯಬೇಕಾಗಿಲ್ಲ. ಚಿಕ್ಕ ಮಗುವಿದ್ದಾಗಿನಿಂದಲೇ ಅವರಿಗೆ ಪುಸ್ತಕದ ಪರಿಚಯ ಮಾಡಿಸಿ. ಅವರು ಇನ್ನೂ ಓದಲು ಸಿದ್ಧವಾಗಿಲ್ಲ ನಿಜ. ಆದರೆ, ಅವರು ಚಿತ್ರಗಳನ್ನು ಮತ್ತು ನೀವು ಪುಟಗಳನ್ನು ತಿರುಗಿಸುವ ವಿಧಾನವನ್ನು ಗಮನಿಸುತ್ತಾರೆ. ನೀವು ಚಿಕ್ಕ ವಯಸ್ಸಿನಿಂದಲೇ ಮಗುವಿಗೆ ಪುಸ್ತಕಗಳನ್ನು ಓದಿದರೆ, ಅವರಿಗೆ ಅದರ ಬಗ್ಗೆ ಸಕಾರಾತ್ಮಕ ಭಾವನೆ ಬೆಳೆಯುತ್ತದೆ.

ಇತ್ತೀಚೆಗಂತೂ ಮಗುವಿಗೆ ವಿವಿಧ ರೀತಿಯ ಪುಸ್ತಕಗಳು ಲಭ್ಯವಿದೆ. ಸಂಗೀತ ಪುಸ್ತಕಗಳು, ಬಟ್ಟೆ ಪುಸ್ತಕಗಳು, ಪೀಕ್-ಎ-ಬೂ ಪುಸ್ತಕಗಳು, ಸ್ಪರ್ಶಿಸಿ ಮತ್ತು ಅನುಭವಿಸುವ ಪುಸ್ತಕಗಳು ಇತ್ಯಾದಿ. ನೀವು ಇವುಗಳ ಉಪಯೋಗ ಪಡೆಯಬಹುದು.

ನೀವೇ ಅವರಿಗೆ ಉದಾಹರಣೆಯಾಗಿ :ಒಂದು ಮಾತಿದೆ, “ಮಕ್ಕಳು ಎಂದಿಗೂ ನಿಮ್ಮ ಮಾತನ್ನು ಕೇಳುವುದಿಲ್ಲ ಎಂದು ಚಿಂತಿಸಬೇಡಿ; ಅವರು ಯಾವಾಗಲೂ ನಿಮ್ಮನ್ನು ನೋಡುತ್ತಿದ್ದಾರೆಂದು ಚಿಂತಿಸಿ ” ನಿಮ್ಮ ಮಗು ಕೆಲವು ನಡವಳಿಕೆಯನ್ನು ಬೆಳೆಸಿಕ್ಕೊಳಬೇಕೆಂದು ನೀವು ಬಯಸಿದರೆ, ನೀವು ಅದನ್ನು ಮೊದಲು ಅನುಸರಿಸಬೇಕು. ಆದ್ದರಿಂದ, ಓದುವ ಮಕ್ಕಳನ್ನು ಬೆಳೆಸಲು ನೀವು ಮೊದಲು ಓದುಗರಾಗಬೇಕು, ಆಗುವ ಪ್ರಾಮಾಣಿಕ ಪ್ರಯತ್ನವನ್ನಾದರೂ ಮಾಡಬೇಕು.

ನೀವು ಟಿವಿಯನ್ನು ವೀಕ್ಷಿಸುತ್ತ ಮಗುವನ್ನು ಓದಲು ಕೇಳಿದರೆ, ಅವರು ವಿರೋಧಿಸುತ್ತಾರೆ. ನೀವು ದಿನವೂ ಕೆಲವು ನಿಮಿಷಗಳಾದರೂ ಓದುವ ಅಭ್ಯಾಸ ಮಾಡಿಕೊಂಡರೆ, ಅದನ್ನು ನೋಡಿ ಅವರು ಕಲಿಯುತ್ತಾರೆ.

ಮನೆಯ ಪರಿಸರ : ಒಂದು ಮಾತಿದೆ “”ನಮ್ಮ ಪರಿಸರದಿಂದ ನಾವು”.ನಿಮ್ಮ ಮನೆಯಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ವಾತಾವರಣ ಇರಬೇಕು. ನೀವು ಪುಸ್ತಕಗಳು ಮತ್ತು ಓದುವಿಕೆಗೆ ಪ್ರಾಮುಖ್ಯತೆ ನೀಡಿದರೆ, ಅದು ಮಕ್ಕಳ ಮನಸ್ಸಿನಲ್ಲಿ ಮೂಡುತ್ತದೆ ಮತ್ತು ಅವರು ಕೂಡ ಪುಸ್ತಕಗಳಿಗೆ ಪ್ರಾಮುಖ್ಯತೆ ನೀಡಲು ಪ್ರಾರಂಭಿಸುತ್ತಾರೆ.

ಮನೆಯಲ್ಲಿ ಪುಸ್ತಕಗಳು ಮಕ್ಕಳ ಕಣ್ಣಿಗೆ ಕಾಣುವಂತಿರಬೇಕು ಮತ್ತು ಅವರಿಗೆ ಸುಲಭವಾಗಿ ಎಟುಕುವಂತಿರಬೇಕು. ನೀವು ಅವರಿಗಾಗಿ ಒಂದು ಚಿಕ್ಕ ಗ್ರಂಥಾಲಯವನ್ನು ಹೋಲುವ ವ್ಯವಸ್ಥೆಯನ್ನು ಮಾಡಿಕೊಡಬಹುದು. ಬಗೆಬಗೆಯ ಪುಸ್ತಕಗಳು, ಅದನ್ನು ಕಾಯಿದಿರಿಸುವ ವ್ಯವಸ್ಥೆ ಮತ್ತು ಕುಳಿತು ಓದುವ ಜಾಗ ಇಷ್ಟಿದ್ದರೆ ಸಾಕು.

ಅವರನ್ನು ಹತ್ತಿರದ ಗ್ರಂಥಾಲಯಗಳಿಗೆ ಕರೆದೊಯ್ಯಿರಿ ಮತ್ತು ಅವರಿಗೆ ಪುಸ್ತಕಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಿ. ಹೊಸ ಪುಸ್ತಕಗಳನ್ನು ಕೊಂಡುಕೊಳ್ಳುವಾಗ ಅವರ ಅಭಿಪ್ರಾಯಗಳಿಗೆ ಬೆಲೆ ಕೊಡಿ. ಈ ರೀತಿಯ ಚಟುವಟಿಕೆಗಳು ಪುಸ್ತಕಗಳ ಬಗ್ಗೆ ಪ್ರೀತಿಯನ್ನು ಬೆಳೆಸುತ್ತದೆ.

ದಿನಚರಿ :ಯಾವುದೇ ಅಭ್ಯಾಸವನ್ನು ಬೆಳೆಸಿಕೊಳ್ಳಲು ದಿನಚರಿ ಬಹಳ ಮುಖ್ಯ. ಅಲ್ಲದೆ, ಮಕ್ಕಳು ದಿನಚರಿಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಪ್ರತಿದಿನ ಕನಿಷ್ಠ 20 ನಿಮಿಷ ಓದುವ ಸಮಯವನ್ನು ಬದಿಗಿರಿಸಿ. ಮಗುವಿಗೆ ಸ್ವಂತವಾಗಿ ಓದಲು ಸಾಧ್ಯವಾದರೆ, ಒಳ್ಳೆಯದು. ಇಲ್ಲದಿದ್ದರೆ, ನೀವು ಅವರಿಗೆ ಓದಿ ಹೇಳಬಹುದು.

ಓದು ಖುಷಿ ನೀಡುವಂತೆ ನೋಡಿಕ್ಕೊಳಿ :ದಿನಚರಿಗಳು ಮುಖ್ಯವಾದರೂ ಅದರ ಬಗ್ಗೆ ಕಠಿಣ ನಿಯಮಗಳನ್ನು ಮಾಡಬೇಡಿ. ಓದುವುದು ಮಗುವಿಗೆ ಮನರಂಜನೆ ಮತ್ತು ಆನಂದದಾಯಕವಾಗಿರಬೇಕು. ನೀವು ಅದನ್ನು ಒಂದು ಕೆಲಸದಂತೆ ಅಥವಾ ಕರ್ತವ್ಯದಂತೆ ಮಾಡಿದರೆ ಮಕ್ಕಳು ವಿರೋಧಿಸುತ್ತಾರೆ. ಓದುವುದನ್ನು ಹೇಗೆ ಆನಂದಿಸಬೇಕು ಎಂಬುದನ್ನು ಅವರಿಗೆ ತೋರಿಸಿಕೊಡಿ.

ಕುಟುಂಬದ ಎಲ್ಲ ಸದಸ್ಯರು ಅಥವಾ ಕನಿಷ್ಠ ಒಬ್ಬ ವಯಸ್ಕರಾದರೂ ಮಕ್ಕಳೊಂದಿಗೆ ಕುಳಿತು ಓದುವ ಅಭ್ಯಾಸ ಮಾಡಿಕೊಳ್ಳಿ. ಮಕ್ಕಳಿಗೆ ಬಹುಮಾನವಾಗಿ ಪುಸ್ತಕಗಳನ್ನು ನೀಡಿ. ಮಕ್ಕಳು ಓದುವ ಪುಸ್ತಕಗಳ ಬಗ್ಗೆ ನಿಗಾ ಇಡಲು ನೀವು ವರ್ಣರಂಜಿತ ಜರ್ನಲ್‌ಗಳನ್ನು ಮಾಡಬಹುದು. ಇದು ಹೆಚ್ಚಿನ ಪುಸ್ತಕಗಳನ್ನು ಓದಲು ಅವರನ್ನು ಪ್ರೋತ್ಸಾಹಿಸುತ್ತದೆ.

You may also like...